ಸಗರ -
	ಇಕ್ಷ್ವಾಕು ವಂಶದ ಅಸಿತ್ ಅಥವಾ ಬಾಹುಕನ ಮಗ; ತಾಯಿ ಯಾದವಿ. ಇವನು ಹುಟ್ಟುವಾಗಲೇ ವಿಷಸಹಿತನಾಗಿ (ಸಗರನಾಗಿ) ಜನಿಸಿದ್ದರಿಂದ ಸಗರನೆಂಬ ಹೆಸರು ಬಂತು. ಇವನ ಗುರು ಭಾರ್ಗವ ಮುನಿ. ಇವನಿಗೆ ಸಕಲ ವೇದಶಾಸ್ತ್ರಗಳನ್ನು ಕಲಿಸಿ, ಆಗ್ನೇಯಾಸ್ತ್ರವನ್ನು ಕೊಟ್ಟ. ಇದರ ಸಹಾಯದಿಂದ ವಿಷಯಲಂಪಟತೆ ಹಾಗೂ ದ್ಯೂತಾಸಕ್ತಿಯಿಂದ ಕಳೆದುಕೊಂಡಿದ್ದ ತನ್ನ ತಂದೆಯ ರಾಜ್ಯವನ್ನು  ಈತ ಮರಳಿ ಪಡೆದ.

	ಇವನಿಗೆ ಇಬ್ಬರು ಪತ್ನಿಯರು. ಒಬ್ಬಳು ವಿದರ್ಭರಾಜನ ಮಗಳು, ಕೇಶಿನಿ ಮತ್ತೊಬ್ಬಳು ಶಿಬಿರಾಜನ ಪುತ್ರಿ ಸುಮತಿ. ಕೇಶಿನಿಯಿಂದ ಅಸಮಂಜನೆಂಬ ಪುತ್ರನನ್ನು ಪಡೆದ, ಸುಮತಿಗೆ ಅರವತ್ತು ಸಾವಿರ ಮಕ್ಕಳಾದರು. ಅಸಮಂಜನು ಕ್ರೂರಿಯೂ ಕೇಡುಗನೂ ಆಗಿದ್ದ. ಆದುದರಿಂದ ಸಗರ ಆತನನ್ನು ತೊರೆದ. 

	ಈತ ಅಶ್ವಮೇಧಯಾಗವನ್ನು ಮಾಡಿ ಯಜ್ಞದ ಕುದುರೆಯನ್ನು ಬಿಟ್ಟ. ಇಂದ್ರಪದವಿಯನ್ನು ಕಳೆದುಕೊಳ್ಳುವ ಭೀತಿಯಿಂದ ಇಂದ್ರ ಯಜ್ಞದ ಕುದುರೆಯನ್ನು ರಾಕ್ಷಸ ವೇಷದಿಂದ ಬಂದು ಕದ್ದ. ಕುದುರೆಯನ್ನು ಹುಡುಕಿಕೊಂಡು ಇವನ ಅರವತ್ತು ಸಾವಿರ ಮಕ್ಕಳೂ ಹೊರಟರು. ಎಲ್ಲಿಯೂ ಕುದುರೆ ಕಾಣದೆ ಪಾತಾಳ ಲೋಕವನ್ನು ಹೊಕ್ಕು ತಪಸ್ಸು ಮಾಡುತ್ತಿದ್ದ ಕಪಿಲ ಮುನಿಯ ಬಳಿ ಕಟ್ಟಿದ್ದ ಕುದುರೆಯನ್ನು ನೋಡಿ, ಮುನಿಯೇ ಕುದುರೆಗಳ್ಳನೆಂದು ತಪ್ಪಾಗಿ ತಿಳಿದರು. ಮುನಿಯನ್ನು ಬಹುವಾಗಿ ಬಾಧಿಸಿದರು. ಕೋಪಗೊಂಡ ಆತ ತಪಶ್ಶಕ್ತಿಯಿಂದ ಅವರನ್ನು ಸುಟ್ಟುಹಾಕಿದ. ಅವರು ಬೂದಿಯಾದರು. ಸಗರನಿಗೆ ಈ ವಿಚಾರ ತಿಳಿಯದೆ ಆತಂಕಗೊಂಡಿದ್ದ. ಅಸಮಂಜನ ಮಗನಾದ ಅಂಶುಮಂತನನ್ನು ಕರೆದು ಚಿಕ್ಕಪ್ಪಂದಿರನ್ನೂ ಕುದುರೆಯನ್ನೂ ಹುಡುಕಿ ತರಲು ಹೇಳಿದ. ತನ್ನ ಚಿಕ್ಕಪ್ಪಂದಿರೆಲ್ಲಾ ಸತ್ತು ಬೂದಿಯಾದು ದನ್ನು ತಿಳಿದ ಆತ ಅವರಿಗೆ ಸದ್ಗತಿ ದೊರಕಿಸಲು, ಚಿಕ್ಕಪ್ಪಂದಿರು ಬೂದಿಯಾದ ಸ್ಥಳಕ್ಕೆ ಗಂಗಾನದಿ ಯನ್ನು ತರಲು ಬಹಳ ಕಷ್ಟಪಟ್ಟ. ಆದರೆ ಗಂಗೆ ಬರಲಿಲ್ಲ. ಕುದುರೆಯನ್ನು ಹುಡುಕಿ ತಂದು ತಾತನಿಗೆ ಒಪ್ಪಿಸಿದ. ಕೆಲಕಾಲದ ಅನಂತರ ಇವರಿಬ್ಬರೂ ಮೃತರಾದರು. ಅನಂತರ ಅಂಶುಮಂತನ ಮೊಮ್ಮಗ ಭಗೀರಥ ತಪಸ್ಸು ಮಾಡಿ ಗಂಗಾನದಿಯನ್ನು ಭೂಮಿಗೆ ತರಲು ಸಂಕಲ್ಪಮಾಡಿ ಶಿವನ ಸಹಾಯವನ್ನು ಪಡೆದ. ಜಹ್ನು ಮುನಿಯ ಆಶ್ರಮವನ್ನು ಗಂಗೆ ತೋಯಿಸಿದಳು. ಇದರಿಂದ ಕೋಪಗೊಂಡ ಮುನಿ, ನದಿಯನ್ನು ಕುಡಿದ. ಭಗೀರಥ ಪ್ರಾರ್ಥಿಸಲಾಗಿ ಮುನಿ ತನ್ನ ಕಿವಿಯಿಂದ ನದಿಯನ್ನು ಬಿಟ್ಟ. ಗಂಗೆಯು ಜಾಹ್ನವಿ ಎಂದು ಹೆಸರಾದಳು. ಅನಂತರ ಈತ ತನ್ನ ಅಜ್ಜಂದಿರ ಬೂದಿಯ ಮೇಲೆ ಗಂಗೆಯನ್ನು ಹರಿಸಿ, ಅವರಿಗೆ ಸದ್ಗತಿಯನ್ನು ದೊರಕಿಸಿದ.							
				(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ